ಹವ್ಯಕರ ಹಾಡುಗಳು

	ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಈ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿರುವ ಬ್ರಾಹ್ಮಣವರ್ಗದ ಒಂದು ಉಪಪಂಗಡವಾದ ಹವ್ಯಕರು ಹಾಡುವ ಪದಗಳನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಹವ್ಯಕರು, ಕದಂಬ ಮಯೂರಶರ್ಮನ ಕಾಲದಲ್ಲಿ ವಿಂಧ್ಯದಿಂದ ಇಲ್ಲಿಗೆ ಬಂದು ನೆಲೆಸಿದವರು ಎಂದು ಐತಿಹ್ಯ. ಆಚಾರ ಪದ್ಧತಿಗಳಲ್ಲಿ ಈ ವರ್ಗಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಇವರು ಆಡುವುದು ಇವತ್ತಿನ ರೂಢಿಯ ಕನ್ನಡಕ್ಕಿಂತ ತುಂಬ ಬೇರೆಯಾದ, ಹಳಗನ್ನಡ ಪ್ರಚುರವಾದ ಒಂದು ವಿಶಿಷ್ಟ ಭಾಷೆ. ಇವರ ಜೀವನವೃತ್ತಿ ಸರ್ವೇಸಾಧಾರಣವಾಗಿ ಅಡಕೆ ತೋಟದ ವ್ಯವಸಾಯ.

	ಹವ್ಯಕರಲ್ಲಿ ಅಸಂಖ್ಯ ಹಾಡುಗಳು ಪ್ರಚಲಿತವಿವೆ. ಈ ಹಾಡುಗಳನ್ನು ಸ್ಥೂಲವಾಗಿ ಹಬ್ಬದ ಹಾಡುಗಳು (ದೀಪಾವಳಿ, ಗಣೇಶಚೌತಿ, ಭೂಮಿ ಹುಣ್ಣಿಮೆ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಹೇಳುವಂಥವು), ಮದುವೆಯ ಹಾಡುಗಳು (ಮದುವೆ, ವಧೂಗೃಹ ಪ್ರವೇಶ, ಗರ್ಭಾದಾನ ಮುಂತಾದ ಸಮಾರಂಭಗಳಿಗೆ ಸಂಬಂಧಿಸಿದವು; ಹವ್ಯಕರ ಹಾಡುಗಳಲ್ಲಿ ಇದೇ ದೊಡ್ಡ ಭಾಗ), ಹೋಮಹವನ, ಚೌಲೋಪನಯನ ಇತ್ಯಾದಿ ವೈದಿಕ ಕ್ರಿಯೆ ಸಂಸ್ಕಾರಗಳಿಗೆ ಸಂಬಂಧಿಸಿದವು, ಉದಯರಾಗದ ಹಾಡುಗಳು, ಕೆಲಸದ ಹಾಡುಗಳು (ಮೊಸರು ಕಡೆಯುವುದು, ಸಾರಿಸುವುದು, ಗುಡಿಸುವುದು ಇತ್ಯಾದಿ ಮನೆವಾರ್ತೆಯ ಕೆಲಸಗಳಲ್ಲಿ ಹೇಳಿಕೊಳ್ಳುವಂಥವು), ವ್ರತಕಥೆಗಳು, ಪುರಾಣಗಳು, ಮಹಾತ್ಮೆಗಳು ಇತ್ಯಾದಿಯಾಗಿ ವರ್ಗೀಕರಿಸಬಹುದು. ಈ ಹಾಡುಗಳಲ್ಲಿ ಅರ್ಧಕ್ಕೆ ಮಿಕ್ಕು ತ್ರಿಪದಿಗಳೇ. ತ್ರಿಪದಿಗಳನ್ನು ಹಾಡುವಾಗ ಸಾಮಾನ್ಯವಾಗಿ, ಎರಡನೆಯ ಸಾಲನ್ನು ಒಂದು ಸಲ ಮುಕ್ಕಾಲು ಹೇಳಿ ಇನ್ನೊಮ್ಮೆ ಇಡಿಯಾಗಿ ಪುನರಾವರ್ತನೆ ಮಾಡುವುದು ರೂಢಿ. ಆದರೆ ಹವ್ಯಕರು ಈ ಪದಗಳನ್ನು ಹಾಡುವ ಪದ್ಧತಿ ಬೇರೆ. ಅದು ಹೀಗೆ :
ಹತ್ತೆಳೆಯ ಜನಿವಾರ ಹೊಟ್ಟೆಮೇಲಲೆಯುತ್ತ
ಇಟ್ಟ ಶ್ರೀಗಂಧ ಬೆವರುತ್ತ
ಬೆವರುತ್ತಲಪ್ಪಯ್ಯ
ಮಂತ್ರಬಿನ್ನಪವ ತೊಡಗಿದ
ಅಂಶ ಷಟ್ಪದಿಗಳ ಅರ್ಧವಿರಬಹುದಾದ ಇನ್ನೊಂದು ರೀತಿಯ ತ್ರಿಪದಿಗಳೂ ಇಲ್ಲಿ ಬಳಕೆಯಲ್ಲಿವೆ. ಉದಾ :
ಕಟ್ಟಿದ ಕಣ್ಣಿಯ ಬಿಡುವನಕ
ಸುತ್ತಣ ದೇವರ ಬಲಗೊಂಬೆ
ಹೊಲಕ್ಹೋಗಿ ಬರುವನಕ ಹುಲಿಯಣ್ಣನ ಕೃಪೆಯಿರಲಿ
	ಕಥನಗೀತೆಗಳಲ್ಲಿ ವಿವಿಧ ಚೌಪದಿಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಈ ಚೌಪದಿಗಳು ವಿವಿಧ ದ್ವಿಪದ ಪಲ್ಲವಿಗಳಿಂದ ಕೂಡಿರುತ್ತವೆ. ಚೌಪದಿಯ ಎರಡು ಸಾಲುಗಳ ಜೊತೆ ತ್ರಿಪದಿಯ ಉತ್ತರಾರ್ಧವನ್ನು ಕೂಡಿಸಿ ಮಾಡಿಕೊಂಡ ಹೊಸ ಬಂಧಗಳೂ ಇಲ್ಲಿ ಕಾಣಸಿಗುತ್ತವೆ. ಇವೇ ಅಲ್ಲದೆ ಯಕ್ಷಗಾನದ ಪ್ರಭಾವದಿಂದ ರೂಪುಗೊಂಡಿರಬಹುದಾದ ಅನೇಕ ಬೇರೆ ಬೇರೆ ಬಂಧಗಳನ್ನೂ ನೋಡಬಹುದು. ಹಾಡುಗಳ ಭಾಷೆ ಸಂಪೂರ್ಣವಾಗಿ ಹವ್ಯಕರ ಆಡುಗನ್ನಡವಾಗಿರದೆ ಗ್ರಾಂಥಿಕ ಭಾಷೆಯ ಮಿಶ್ರಣವಾಗಿರುತ್ತದೆ.

	ಈ ಹಾಡುಗಳಲ್ಲಿ ಶಂಕರಾಭರಣ, ಮೋಹನ, ಬೃಂದಾವನ ಸಾರಂಗ ಮುಂತಾದ ಕೆಲವು ರಾಗಗಳು ಕಾಣದೊರೆಯುತ್ತವೆ. ಇವಲ್ಲದೆ ಪೂರ್ಣ ಸಂಚಾರವಿಲ್ಲದ ನಾಲ್ಕಾರು ಮಟ್ಟುಗಳನ್ನೂ ಕಾಣಬಹುದು. ಸ್ವರಗಳನ್ನು ಗಮಕವಿಲ್ಲದೆ ಹಾಡುತ್ತಾರೆ. ತಾಳದಲ್ಲಿ ಪ್ರಾಯಃ ಯಕ್ಷಗಾನದ ಪ್ರಭಾವದಿಂದಾಗಿ ಸಾಕಷ್ಟು ವೈವಿಧ್ಯವಿರುವ ರಚನೆಗಳಿವೆ.

	ಈ ಹಾಡುಗಳ ರಚನೆ ದೇಶಿಯೇ ಆಗಿದ್ದರೂ ಮಾರ್ಗದತ್ತ ಕೈಚಾಚುತ್ತಿರುವುದನ್ನು ಸ್ಪಷ್ಟ ಕಾಣಬಹುದು. ಭಾವದ ಸಹಜ ನಿರ್ಭರತೆ ಮತ್ತು ಬುದ್ಧಿಯ ಸಂಸ್ಕøತ ಗಾಂಭೀರ್ಯ, ಜೀವನ ಲೋಲುಪ್ತಿ ಹಾಗೂ ಬೌದ್ಧಿಕ ಸಂಯಮ - ಈ ಎರಡರ ರುಚಿಯೂ ಕಾಣಬರುವ, ಎರಡೂ ಒಂದಕ್ಕೊಂದು ತಾಕಲಾಡಿ ಹೊಸ ಪಾಕವಾಗುವ ಸೊಬಗು ಈ ಗೀತೆಗಳಲ್ಲಿ ಕಂಡುಬರುತ್ತದೆ. ಇವುಗಳ ಅಭಿವ್ಯಕ್ತಿ, ಉತ್ಸವ ಹಾಗೂ ಪುರಾಣಗಳ ಚೌಕಟ್ಟಿನಲ್ಲೇ ಆದರೂ ಉತ್ಸವ ನಿತ್ಯಭಾವಗಳ ತೀವ್ರ ಅನುಭೂತಿಯೇ ಆಗುತ್ತದೆ; ಪುರಾಣ ಆತ್ಮೀಯವಾಗಿ ವರ್ತಮಾನ ದಲ್ಲಿ ಅರಳಿಬಿಡುತ್ತದೆ. ಅಪ್ಪ ಅಮ್ಮ, ಮಾವ, ಅತ್ತೆ, ತಮ್ಮ, ತಂಗಿ, ಬಂಧುಗಳು-ಇವರಗಳ ವಿವಿಧ ಭಂಗಿಗಳೇ ಈ ಹಾಡುಗಳಲ್ಲಿ ಶೋಭಿಸು ವುದನ್ನು ಗಮನಿಸಬಹುದು. ಪುಟ್ಟ ಬೆನಮಯ್ಯನ ಅಪ್ಪ ಕರೆವೊಲೆ ಬಂದ, ಅಕ್ಕ ಬರಬೇಕು ಮುಕ್ಕಣ್ಣನರಸಿಯು; ಕಣ್ಣುಗಳು ಕರಗಿದೊ ಸರ್ವಾಂಗ ಬೆವರಿದೊ ಸೀತಾಂಗನೆಯನೆತ್ತಿ, ಬೆವರಿಬಂದಳಿಯಗೆ ಮುತ್ತಿನ ಬೀಸಣಿಗೆ ಕೊಡಿರವ್ವ ಇತ್ಯಾದಿ.

	ಈ ಹಾಡುಗಳಲ್ಲಿ ಹವ್ಯಕರ ಸರ್ವತ್ರ ಸಮೂಹ ಗುಣಗಳೆನ್ನ ಬಹುದಾದ ಉತ್ಸವೋನ್ಮಾದ, ಬಂಧುವಾತ್ಸಲ್ಯ, ಅತಿಥಿಪ್ರೇಮ, ದುಂದುಗಾ ರಿಕೆಯೆನಿಸಬಹುದಾದಷ್ಟು ಬಿಚ್ಚುಗೈ-ಈ ಗುಣಗಳು ಪ್ರತಿಬಿಂಬಿತವಾಗಿರು ವುದನ್ನು ಕಾಣಬಹುದು.

	ಹವ್ಯಕರ ಹಾಡುಗಳು ಎಂಬ ಸಂಗ್ರಹವನ್ನು ಶಾಲಿನಿ ರಘುನಾಥ್ ಅವರು ಪ್ರಕಟಿಸಿದ್ದಾರೆ (1979). ಕಾರವಾರ ಜಿಲ್ಲೆಯ ಜನಪದ ಗೀತೆಗಳು ಎಂಬ ಕೃತಿಯಲ್ಲಿ ಎನ್.ಆರ್. ನಾಯಕರು ಹವ್ಯಕರ ಹಾಡುಗಳನ್ನು ದಾಖಲಿಸಿದ್ದಾರೆ.	
	(ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ